 ಎಸೆತಗಳು 
ದೈಹಿಕ ಚಟುವಟಿಕೆಗಳಲ್ಲಿ ಒಂದು ಪ್ರಮುಖ ವಿಭಾಗ, ಎಸೆತಗಳಲ್ಲಿ ಗುಂಡು ಎಸೆತ, ಸರಪಳಿಯ ಗುಂಡು ಎಸೆತ, ತಟ್ಟೆ ಎಸೆತ ಮತ್ತು ಭರ್ಜಿ ಎಸೆತ ಎಂಬ ಭಾಗಗಳಿವೆ.
ಈ ಪಂದ್ಯಗಳಿಗೆ ಯೋಗ್ಯವಾದ ಗಾತ್ರ ಮತ್ತು ತೂಕವುಳ್ಳ ಗುಂಡುಗಳನ್ನೂ ದಪ್ಪ ಮತ್ತು ಉದ್ದವುಳ್ಳ ಭರ್ಜಿಗಳನ್ನೂ ಸಿದ್ಧಮಾಡಿರುತ್ತಾರಲ್ಲದೆ ಅನೇಕ ಅಂತಾರಾಷ್ಟ್ರೀಯ ನಿಯಮಾವಳಿಗಳನ್ನೂ ಮಾಡಿದ್ದಾರೆ. ಹಿಂದಿನ ಕಾಲದಲ್ಲಿ ಕಲ್ಲುಗುಂಡುಗಳನ್ನು ಎಸೆಯುವುದು ಒಂದು ಆಟವಾಗಿತ್ತು. ಭರ್ಜಿಯನ್ನು ಆಟಕ್ಕೂ ಬೇಟೆಗೂ ದೂರದಿಂದ ಎಸೆಯುತ್ತಿದ್ದರು.
 ಗುಂಡು ಎಸೆತ 
ಒಂದು ವೃತ್ತದೊಳಗೆ ನಿಂತು ಗುಂಡನ್ನು ಎಸೆಯಬೇಕು. ಈ ವೃತ್ತ 2,135 ಮೀ. ಅಥವಾ 7' ಸುತ್ತಳತೆದಾಗಿರುತ್ತದೆ. ಸುತ್ತಳತೆಯ ಮುಂಭಾಗದಲ್ಲಿ ಕಾಲ್ ತಡೆಯ ಫಲಕ(ಬೋರ್ಡ್) ಇರುತ್ತದೆ. ಗುಂಡಿನ ತೂಕ ಪುರುಷರಿಗಾದರೆ 16 ಪೌಂಡು: 
ಸ್ತ್ರೀಯರಿಗಾದರೆ 8 ಪೌಂಡು 13 ಔನ್ಸ್‌. ಸುತ್ತಳತೆ ಪುರುಷರಿಗೆ 110-130 ಮಿ.ಮೀ: ಸ್ತ್ರೀಯರಿಗೆ 95-110 ಮಿ.ಮೀ. ಗುಂಡನ್ನು ಒಂದೇ ಕೈಯಲ್ಲಿ ಹಿಡಿದು ಭುಜದ ಮೇಲ್ಭಾಗದಿಂದ ಎಸೆಯಬೇಕು. ಎಸೆಯುವಾಗ ಕೈ ಭುಜಕ್ಕಿಂತ ಕೆಳಗಿಳಿಯಬಾರದು, ಮೊಣಕೈ ಭುಜದ ಹಿಂಭಾಗಕ್ಕೆ ಬರಬಾರದು. ಎಸೆದ ಅನಂತರ ವೃತ್ತದ ಹಿಂಭಾಗದ ಅರ್ಧದಿಂದ ಹೊರಗೆ ಬರಬೇಕು. ಎಸೆದ ಗುಂಡು ಗೊತ್ತಾದ ಅವಕಾಶದೊಳಕ್ಕೆ ಬೀಳಬೇಕು. ಎಸೆಯುವಾಗ ಕೈ ಮತ್ತು ನೆಲದ ನಡುವಿನ ಕೋನ 450 ಇರಬೇಕು. ಗುಂಡನ್ನು ತೀರ ಎತ್ತರ 
ಒಗೆಯಬಾರದು. ಒಗೆದ ಮೇಲೆ ವೃತ್ತದ ಹೊರಭಾಗವನ್ನು ಮುಟ್ಟಬಾರದು.

 ಸರಪಳಿಯ ಗುಂಡು 
ಇಲ್ಲೂ ವೃತ್ತ 2,135 ಮೀ ಅಥವಾ 7' ಸುತ್ತಳತೆಯದಾಗಿರಬೇಕು. ಎಸೆಯುವಾಗ ಕೈ ಚೀಲಗಳನ್ನು ಉಪಯೋಗಿಸಬಹುದು. ಎಸೆಯುವುದಕ್ಕೆ ಮೊದಲು ಗುಂಡು ನೆಲದ ಮೇಲೆ ಉರುಳಬಹುದು. ಎಸೆಯುವ ವೇಳೆಯಲ್ಲಿ ಗುಂಡು ನೆಲಕ್ಕೆ ತಗುಲಬಾರದು. 

ಹಾಗೇನಾದರೂ ತಗುಲಿದರೆ ಎಸೆವಾತನಿಗಿರುವ ಮೂರು ಅವಕಾಶಗಳಲ್ಲೊಂದು ಇಲ್ಲದಾಗುತ್ತದೆ. ಮಿಕ್ಕ ನಿಯಮಗಳು ಸಾಮಾನ್ಯ ಗುಂಡು ಎಸೆತದಂತೆ, ಇರುವ ಮೂರು ಅವಕಾಶಗಳಲ್ಲಿ ಎಸೆವಾತನಿಗೆ ಅನುಕೂಲವಾದದ್ದನ್ನು ಮಾತ್ರ ಪರಿಗಣಿಸುವರು.

 ಭರ್ಜಿ ಎಸೆತ 
ಈ ಎಸೆತಕ್ಕೆ 36.5 ಮೀ. ಅಥವಾ 120' ಓಡಿಬರುವ ಅವಕಾಶವಿರಬೇಕು. ಈ ಅವಕಾಶವನ್ನು 2" ಅಥವಾ 5 ಸೆಂ.ಮೀ. ಅಗಲವಿರುವ 2 ಸಮಾನಾಂತರ ರೇಖೆಗಳಿಂದ ಗುರುತಿಸಿರಬೇಕು. ಈ ಸಮಾನಾಂತರ ರೇಖೆಗಳ ಮಧ್ಯದ ಅಂತರ 4 ಮೀ. ಅಥವಾ 13' 1.5".  ಈ ಎಸೆತವನ್ನು ಒಂದು ವೃತ್ತದ ಅಥವಾ ಕಂಸದ ಹಿಂಭಾಗದಿಂದ ಮಾಡಬೇಕು. ಈ ಕಂಸ 8 ಮೀ. ಅಥವಾ 26' 3" ತ್ರಿಜ್ಯದ್ದಾಗಿರುತ್ತದೆ. ಈ ಗುರುತನ್ನು ಮರದ ಪಟ್ಟಿಯಿಂದಾಗಲಿ, 7ಸೆಂ. ಮೀ, ಅಥವಾ 2.75" ಅಗಲವುಳ್ಳ, ಬಿಳಿಬಣ್ಣ ಬಳಿದು ನೆಲದ ಮಟ್ಟದಲ್ಲಿ ಹೂತಿರುವ  ಪಟ್ಟಿಯಿಂದಾಗಲಿ ಮಾಡಿರುತ್ತಾರೆ. ಈ ಕಂಸದಿಂದ ಲಂಬ ಕೋನಗಳಲ್ಲಿ ಮತ್ತು ಓಟದ ಸಮಾನಾಂತರ ರೇಖೆಗಳಿಗೆ ಸಮನಾಗಿ ಗೆರೆಗಳಿರುತ್ತವೆ. ಈ ಗೆರೆಗಳು 1.50ಮೀ. ಅಥವಾ 5' ಉದ್ದ ಮತ್ತು 7 ಸೆಂ. ಅಥವಾ 2.75" ಅಗಲವಿರುತ್ತವೆ.

ಭರ್ಜಿಯನ್ನು ಗೊತ್ತಾದ ಹಿಡಿತದಲ್ಲಿ ಹಿಡಿಯಬೇಕು. ಕೈಗೆತ್ತಿಕೊಂಡ ಮೇಲೆ ಗೊತ್ತಾದ ಭಾಗದಲ್ಲಲ್ಲದೆ ಎಲ್ಲೆಂದರಲ್ಲಿ ಅದರ ತುದಿಯನ್ನು ಊರುವಂತಿಲ್ಲ.
ಪುರುಷರು ಬಳಸುವ ಭರ್ಜಿಯ ತೂಕ 800ಗ್ರಾಂ. (1ಪೌಂ. 2.218ಔ.), ಉದ್ದ 260-270ಸೆಂಮೀ (8’61/4"-8’10 1/4"); ಸ್ತ್ರೀಯರು ಬಳಸುವ ಭರ್ಜಿಯ ತೂಕ 600ಗ್ರಾಂ. (1ಪೌಂ. 5.163ಔ.), ಉದ್ದ 220ಸೆಂಮೀ. 230ಸೆಂಮೀ. (7’21/2"-7’61/2"). 

ಎಸೆತದ ನಿಯಮಗಳು ಗುಂಡಿನ ಎಸೆತದಲ್ಲಿದ್ದಂತೆ.

 ತಟ್ಟೆ ಎಸೆತ 
ಈ ತಟ್ಟೆ ಮರದಿಂದ ಮಾಡಿದ್ದಾದರೆ ಸುತ್ತಲೂ ಲೋಹದಪಟ್ಟಿ ಇರಬೇಕು. ಪುರುಷರ ತಟ್ಟೆಯ ತೂಕ 2 ಕಿ.ಗ್ರಾಂ. (4 ಪೌಂ. 6.547 ಔನ್ಸ್‌.). ಸುತ್ತಳತೆ 219-221 ಮಿ.ಮೀ. (85/8"-83/4"). ಮಧ್ಯಭಾಗದ ದಪ್ಪ 44-46 ಮಿ.ಮೀ. 

(13/4"-17/8") ಸ್ತ್ರೀಯರ ತಟ್ಟೆಯ ತೂಕ 1 ಕಿ. ಗ್ರಾಂ. (2 ಪೌಂ. 3.274 ಔನ್ಸ್‌), ಸುತ್ತಳತೆ 50 ಮಿ. ಮೀ. (2"-2 1/4"), ಮಧ್ಯಭಾಗದ ದಪ್ಪ 37-39 ಮಿ. ಮೀ. (11/2"-15/8")ವರೆಗಿರಬೇಕು.
ಈ ತಟ್ಟೆಯನ್ನು 2.50 ಮೀ. (8’2.5") ಸುತ್ತಳತೆಯ ವೃತ್ತದಿಂದ ಎಸೆಯಬೇಕು. ಇತರ ನಿಯಮಗಳು ಗುಂಡಿನ ಎಸೆತದಂತೆ. ಈ ಅಭ್ಯಾಸಗಳಿಂದ ದೇಹಬಲದ ಜೊತೆಗೆ ಎಸೆತದ ಜಾಣ್ಮೆಯೂ ಪರೀಕ್ಷಿತವಾಗುತ್ತದೆ.	      (ಬಿ.ಎಲ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ